ಮೆಕರೆಂಕೊ, ಅಂತೋನ್ ಸೆಮ್ಯಾನೊವಿಚ್
1888-1939, ಶಿಕ್ಷಣ ತಜ್ಞ ಹಾಗೂ ಬರೆಹಗಾರ. ಮಾನವತಾವಾದಿ. 1888ರಲ್ಲಿ ರಷ್ಯದ ಉಕ್ರೇನ್ ಪ್ರಾಂತ್ಯದಲ್ಲಿ ಜನಿಸಿದ. ಅಂತರ್ಯುದ್ಧದಿಂದ ಆರ್ಥಿಕವಾಗಿ ಅಸ್ತವ್ಯಸ್ತ ಗೊಂಡಿದ್ದ (1920) ಉಕ್ರೇನ್ ಪ್ರಾಂತ್ಯದ ಪಲ್ತಾವಾ ಎಂಬ ನಗರದ ಸಮೀಪ ಬಾಲಾಪರಾಧಿಗಳಿಗಾಗಿ ಒಂದು ಕಾಲೋನಿಯನ್ನು ಸಂಘಟಿಸಿದ. ಈ ಕಾಲೋನಿಯಲ್ಲೇ ತನ್ನ ಹೊಸ ತತ್ವಗಳನ್ನು ಪ್ರಯೋಗಿಸಿ ಯಶಸ್ವಿಯಾದ.

	1933ರಲ್ಲಿ ಈತ ಸಾಹಿತ್ಯಕ್ಷೇತ್ರದಲ್ಲಿ ಪದಾರ್ಪಣೆ ಮಾಡಿದ. ಈತನ ಸುಪ್ರಸಿದ್ಧ ಕೃತಿ 'ಪೆದೆಗಾಗೀಚೆಸ್ಕಯ ಪೊಯೆಮಾ (ಬಾಳ್ವೆಯ ದರ್ಶನ). ಈ ಬೃಹತ್ ಕೃತಿಯಲ್ಲಿ ಅನೇಕಮಂದಿ ಹೇಗೆ ಕಷ್ಟದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಂಡರು, ಅಂತರ್ಯುದ್ಧದಲ್ಲಿ ನರಳಿ ಬಳಲಿ ಬೆಂಡಾದರು, ರಾಷ್ಟ್ರ ನಿರ್ಮಾಣಕಾರ್ಯದಲ್ಲಿ ಹೇಗೆ ತಮ್ಮ ಶ್ರಮದಿಂದ ಸಹಕರಿಸಿದರು ಎಂಬುದನ್ನು ಬಹು ಹೃದಯವಾಗಿ ನಿರೂಪಿಸಿದ್ದಾನೆ. ಈ ಕೃತಿ ನೈತಿಕವಾಗಿ ಪತನಗೊಂಡಿದ್ದ ಜನರಲ್ಲಿ ಮತ್ತೆ ಚೈತನ್ಯವನ್ನು ತುಂಬುವಂತೆ ಉತ್ತೇಜನ ನೀಡಿತಲ್ಲದೆ ಸಮಾಜದಲ್ಲಿ ಮತ್ತೆ ಅವರು ಒಳ್ಳೆಯ ಸ್ಥಾನವನ್ನು ಗಳಿಸಲು ನೆರವು ನೀಡುವಷ್ಟರ ಮಟ್ಟಿಗೆ ಜನಪ್ರಿಯವಾಯಿತು; ಬೋಧಪ್ರದವಾಯಿತು.

	ಈತನ ಈ ಕೃತಿ ಇಂದಿಗೂ ರಷ್ಯ ಮೊದಲಾದ ರಾಷ್ಟ್ರಗಳಲ್ಲಿ ಶಿಕ್ಷಣಕ್ಷೇತ್ರಕ್ಕೆ ಒಂದು ವೈಶಿಷ್ಟ್ಯಪೂರ್ಣ ಕೊಡುಗೆಯಾಗಿದೆ.
	 (ಕೆ.ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ